ಕೆಳದಿ

ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರದಿಂದ ಸು. 5 ಮೈ. ಉತ್ತರಕ್ಕಿರುವ ಒಂದು ಸಣ್ಣ ಹಳ್ಳಿ.  16ನೆಯ ಶತಮಾನದ ಆದಿಯಲ್ಲಿ ತಲೆದೋರಿ, ವಿಜಯನಗರ ಸಾಮ್ರಾಜ್ಯದ ಇಳಿಗಾಲದಲ್ಲಿ, ಎಂದರೆ 16ನೆಯ ಶತಮಾನದ ಮಧ್ಯಭಾಗದಲ್ಲಿ ಪ್ರಾಬಲ್ಯಕ್ಕೆ ಬಂದ ಸಾಮಂತ ರಾಜ್ಯಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಮೆರೆದ ಕೆಳದಿ ಅಥವಾ ಇಕ್ಕೇರಿ ಸಂಸ್ಥಾನದ  ಪ್ರಥಮ ರಾಜಧಾನಿ.  ಇದನ್ನು 18ನೆಯ ಶತಮಾನದ ಕವಿ ಲಿಂಗಣ್ಣ ತನ್ನ ಕನ್ನಡ ಚಂಪೂಕಾವ್ಯವಾದ 'ಕೆಳದಿ ನೃಪವಿಜಯದಲ್ಲಿ ಹೀಗೆ ವರ್ಣಿಸಿದ್ದಾನೆ : 'ಅದರೊಳ್ ಮೈಮೆಯಿನೆಸೆವಾ ತ್ರಿದಶತರಂಗಿಣಿಮಧಿಕಮೆನಿಸುವ ವರದಾ | ನದಿಮೂಲಮೊಪ್ಪುಗುಂ ತನ್ನದಿಯತ್ತರ ತಟದೊಳರ್ಧ ಯೋಜನದೆಡೆಯೊಳ್ ||  ಆ ಕರ್ಣಾಟದೇಶದ ಭೂಕಾಂತೆಯ ವಕ್ತ್ರಪದ್ಮಮೆನೆ ರಾಜಿಸುಗುಂ | ಶ್ರೀಕರಮೆನಿಸಿಯಜಸ್ರಂ ನಾಕವನಿಳಿಕೈದ ಕೆಳದಿಯೆಂದೆನಿಪ ಪುರಂ ||

ಆಕಸ್ಮಿಕವಾಗಿ ದೊರೆತ ನಿಕ್ಷೇಪದಿಂದ ಪ್ರಬಲನಾದ ಕೃಷಿಕಾರ ಚೌಡಪ್ಪಗೌಡ 16ನೆಯ ಶತಮಾನದ ಆದಿಯಲ್ಲಿ ವಿಜಯನಗರ ಸಾಮ್ರಾಟನ ಅಪ್ಪಣೆಯ ಮೇರೆಗೆ ಕೆಳದಿಯೇ ಮೊದಲಾದ ಎಂಟು ಮಾಗಣೆಗಳ ನಾಯಕತನವನ್ನು ವಹಿಸಿಕೊಂಡಾಗ ಕೆಳದಿ ಅವನ ರಾಜಧಾನಿಯಾಯಿತು.  ಆತ ಚೌಡಪ್ಪನಾಯಕನೆನಿಸಿಕೊಂಡು, ಕೆಳದಿಯಲ್ಲಿ ರಾಜೋಚಿತವಾದ ಅರಮನೆಯನ್ನೂ ಭದ್ರತೆಯ ಸಲುವಾಗಿ 'ಹುಡೆ, 'ಕಾಯ್ಪ, 'ಕಟ್ಟಲೆಗಳನ್ನೂ ನಿರ್ಮಿಸಿ, 1500ರಲ್ಲಿ ಕೆಳದಿಪುರದರ ಮನೆಯಲ್ಲಿ ರಾಜಪಟ್ಟ ಕಟ್ಟಿಕೊಂಡನೆಂದು ಲಿಂಗಣ್ಣ ಕವಿ ಹೇಳಿದ್ದಾನೆ.  ಆ ಅರಮನೆಯ, ಕೋಟೆಕೊತ್ತಲಗಳ ಅವಶೇಷಗಳಾವುವೂ ಇಂದಿಗೆ ಉಳಿದಿಲ್ಲ.  ಅಂದಿನಿಂದ ಸು. ಆರು ದಶಕಗಳ ಕಾಲ ಕೆಳದಿ ರಾಜಧಾನಿಯಾಗಿತ್ತಾದ ಕಾರಣ, ಕೆಳದಿಯ ಸೀಮೆ, ಕೆಳದಿವೇಂಟೆ, ಕೆಳದಿ ರಾಜ್ಯ ಎಂಬ ಐತಿಹಾಸಿಕ ಹೆಸರುಗಳು ಹುಟ್ಟಿಕೊಂಡುವು.

ಕೆಳದಿ ನೃಪವಿಜಯ ದಿಂದ ತಿಳಿದು ಬರುವಂತೆ ಕೆಳದಿಯ ಸ್ಥಳಮಾಹಾತ್ಮ್ಯ ಸ್ವಾರಸ್ಯಮಯವಾದ್ದು.  ಆ ಊರಿನ ಹೊರವಲಯದ ಸೀಗೆವಳ್ಳಿಯ ಮಧ್ಯದಲ್ಲಿ 'ವಲ್ಮೀಕಾಚ್ಛಾದಿತವಾದ ರಾಮೇಶ್ವರ ಎಂಬ ಮಹಾ ದಿವ್ಯಲಿಂಗವಿತ್ತಂತೆ.  ಚೌಡಪ್ಪ ನಾಯಕನ ಮನೆಯ ಕವಿಲೆಯೊಂದು ತಾನಾಗಿ ಹೋಗಿ ಆ ಹುತ್ತದ ಮೇಲೆ ಹಾಲ್ಗರೆದು ಬರುವ ಸಂಗತಿ ಅವನಿಗೆ ತಿಳಿಯಿತು.  ಅಷ್ಟರಲ್ಲೆ ಪರಮೇಶ್ವರ ವೃದ್ಧಜಂಗಮನ ರೂಪದಲ್ಲಿ ಚೌಡಪ್ಪನ ಬಳಿ ಬಂದು, ರಾಮೇಶ್ವರ ಲಿಂಗವನ್ನು ಅವನು ಪೂಜಿಸಿದರೆ ಅವನಿಗೆ ಅಖಂಡ ಪೃಥ್ವೀಪತಿತ್ವ ಪ್ರಾಪ್ತವಾಗುವುದೆಂದು ಹೇಳಿ ಕಣ್ಮರೆಯಾದ.  ಅದರಂತೆಯೆ ಚೌಡಪ್ಪ ಮರಗಿಡಕಲ್ಲುಮುಳ್ಳುಗಳಿಂದ ಕೂಡಿದ್ದ ಆ ಸ್ಥಳವನ್ನು ಶುದ್ಧೀಕರಿಸಿ, ಅಲ್ಲಿ ಕಂಡುಬಂದ ಲಿಂಗಮೂರ್ತಿಗೆ ತೃಣಕುಟಿಯೊಂದನ್ನು ನಿರ್ಮಿಸಿ, ನಿತ್ಯವೂ ಧೂಪದೀಪನೈವೇದ್ಯಗಳಿಗಾಗಿ ಭೂದಾನಮಾಡಿದ.  ಅನಂತರ ವಿಜಯನಗರದ ಸಾಮ್ರಾಟನ ಆಜ್ಞೆಯಂತೆ ಕೆಳದಿ ರಾಜ್ಯದ ಒಡೆಯನಾದಾಗ ಅವನು ರಾಮೇಶ್ವರ ದೇವಾಲಯದ ಗರ್ಭಗೃಹವನ್ನು 'ಶಿಲಾಮಯವಾಗಿಸಿದನಂತೆ.
ಕೆಳದಿಯ ಗತಕಾಲದ ವೈಭವವನ್ನು ಇಂದು ಪರಿಚಯ ಮಾಡಿಕೊಡುವ ಅಲ್ಲಿಯ ಐತಿಹಾಸಿಕ ಕೃತಿಗಳಲ್ಲಿ ರಾಮೇಶ್ವರ ದೇವಾಯತನವೇ ಪ್ರಾಚೀನತಮವಾದ್ದು.  ಬೂದು ಹಸಿರು ಬಣ್ಣದ ಕಲ್ಲಿಂದಾದ ಈ ಮಧ್ಯಪ್ರಮಾಣದ ದೇಗುಲ ದ್ರಾವಿಡ ಮತ್ತು ಹೊಯ್ಸಳ ವಾಸ್ತುಶೈಲಿಗಳ ಮಿಶ್ರರೂಪದ್ದಾಗಿದ್ದು, ಒಂದು ಚಿಕ್ಕ ಗರ್ಭಗೃಹ,  ಪ್ರದಕ್ಷಿಣಾಪಥ, ನವರಂಗ ಮತ್ತು ಮುಖಮಂಟಪಗಳಿಂದ ಕೂಡಿದೆ.  ಗುಡಿಯ ಜಗತಿಯ ಹೊರಮೈಯ ಒಂದು ದಿಂಡಿನ ಮೇಲೆ ವಾದ್ಯಗಾರರ, ನರ್ತಕರ ಶಿಲ್ಪಗಳಿವೆ.  ಎರಡೂವರೆ ಅಡಿಯ ಎತ್ತರದ ಮೆರಗುವ ಶಿಲಾಲಿಂಗವಿರುವ ಗರ್ಭಗೃಹದ ಭಿತ್ತಿಯಲ್ಲಿ ಚತರಾಸ್ರಕಾರದ ಅರ್ಧಕಂಬಗಳ ಅಲಂಕರಣವೂ ಅವುಗಳ ನಡುವೆ ಕಣ್ಣಪ್ಪ, ಗರುಡ, ಹನುಮಾನ್, ಒಂಟೆ, ಆನೆ, ಯಾಳಿ, ಮಿಥುನಗಳು, ಆನೆಯ ಜೊತೆಗೆ ಹೋರಾಡುತ್ತಿರುವ ಯೋಧ, ಸೋಮಗ್ರಹಣ, ಮದ್ದಳೆಗಾರ, ಯೋಗಾಸನದಲ್ಲಿರುವ ರಾಮೇಶ್ವರ ಇತ್ಯಾದಿ ಅನೇಕ ಶಿಲ್ಪಗಳಿವೆ.  ಚಾವಣಿಯ ಮುಂಚಾಚಿಕೊಂಡಿರುವ ಭಾಗದ ಏಣುಗಳ ಮೇಲೆ ವೀರಭದ್ರ, ತಾಂಡವವೇಶ್ವರ ಪಾರ್ವತಿ, ಮೋಹಿನಿ, ವೇಣುಗೋಪಾಲ, ಕಾಳಿಂಗಮರ್ಧನ, ಭೈರವ ಇತ್ಯಾದಿ ದೇವದೇವತೆಗಳ ಶಿಲ್ಪಗಳಿವೆ.  ಗರ್ಭಗೃಹದ ಮೇಲಿನ ಗೋಪುರ ಚತುರಾಸ್ರಕಾರದ್ದು.  ನಾಲ್ಕು ಅಂಕಣ ಉದ್ದ ಮತ್ತು ಮೂರು ಅಂಕಣ ಅಗಲವಿರುವ, ಹದಿನೆಂಟು ಕಂಬಗಳಿಂದ ಕೂಡಿದ ಮುಖಮಂಟಪದ ಪಡುವಣ ಮೂಲೆಯ ಎರಡು ಮಾಡಗಳಲ್ಲಿ ಗಣಪತಿ ಮತ್ತು ಮಹಿಷಾಸುರಮರ್ಧಿನಿಯರ ಶಿಲ್ಪಗಳಿವೆ.  ದ್ವಾರಬಂಧದ ಕಂಬತೋಳುಗಳಲ್ಲಿ ಶೈವ ದ್ವಾರಪಾಲಕರಿರುವ ಚಿಕ್ಕ ನವರಂಗ ಮಂಟಪ ಎರಡು ಕಂಬಗಳಿಂದ ಕೂಡಿದೆ.  ಬಸವನಮೂರ್ತಿಯಿರುವ ಈ ನವರಂಗದಲ್ಲಿ ಶಿವಪಾರ್ವತಿಯರ ಕಂಚಿನ ಪ್ರತಿಮೆಗಳೂ ಇವೆ.

ರಾಮೇಶ್ವರ ದೇವಾಲಯಕ್ಕೆ ಸೇರಿದಂತೆಯೇ ಇರುವ ವೀರಭದ್ರ ದೇವಸ್ಥಾನವನ್ನು ನಿರ್ಮಿಸಿದಾತ ಚೌಡಪ್ಪನಾಯಕನ ತಮ್ಮ ಭದ್ರಪ್ಪನಾಯಕ ಇರಬಹುದು.  ದೇವಾಲಯದ ಒಳಮಾಳಿಗೆಯೊಂದರಲ್ಲಿ ಗಂಡಭೇರುಂಡನ ಅದ್ಭುತ ಚಿತ್ರಣವಿದೆ.  ಅದು ವಿಜಯನಗರ ಸಾಮ್ರಾಟ ಅಚ್ಯುತರಾಯನ (1530-1542) ಲಾಂಛನವಾಗಿತ್ತಾದ ಕಾರಣ ಅವನ ಆಳ್ವಿಕೆಯ ಅವಧಿಯಲ್ಲಿ ಭದ್ರಪ್ಪನಾಯಕ ಈ ಮಂದಿರವನ್ನು ಕಟ್ಟಿಸಿರಬೇಕೆಂದು ಊಹಿಸಬಹುದಾಗಿದೆ.  ಗಂಡಭೇರುಂಡ ಪಕ್ಷಿ ತನ್ನ ಎರಡು ಕೊಕ್ಕುಗಳ ಪೈಕಿ ಒಂದೊಂದರಲ್ಲೂ ಒಂದೊಂದು ಸಿಂಹವನ್ನು ಕಚ್ಚಿ ಹಿಡಿದಿದೆ.  ಒಂದೊಂದು ಸಿಂಹದ ಬಾಯಲ್ಲೂ ಒಂದೊಂದು ಅನೆ ಇದೆ.  ಹಾರುವ ಭಂಗಿಯಲ್ಲಿರುವ ಪಕ್ಷಿ ತನ್ನ ಕಾಲುಗಳಿಂದ ಒಂದು ಆನೆಯನ್ನು ಹಿಡಿದುಕೊಂಡಿರುವಂತೆ ಚಿತ್ರಿಸಲಾಗಿದೆ.  ಈ ಗುಡಿಯ ಗರ್ಭಗೃಹ ಮತ್ತು ಮುಖಮಂಟಪಗಳೂ ರಾಮೇಶ್ವರ ದೇವಾಲಯದ ಮಾದರಿಯವೇ ಆಗಿವೆ.  ನವರಂಗದ ಮಧ್ಯದಲ್ಲಿ ತಗ್ಗಾದ ಪಾತಾಳಾಂಕಣವಿರುವುದು ಈ ದೇವಾಲಯದ ವೈಶಿಷ್ಟ್ಯ.  ಗರ್ಭಗೃಹದ ಭಿತ್ತಿಯಲ್ಲಿಯ 'ವಾಸ್ತುಪುರುಷನ ಶಿಲ್ಪ ಕುತೂಹಲಕಾರಿಯಾದ್ದು.  ಮೇಲಿನ ಗೋಪುರ ರಾಮೇಶ್ವರ ದೇವಾಲಯದ ಶಿಖರದಷ್ಟು ಎತ್ತರದಲ್ಲ.  

ವೀರಭದ್ರ ದೇವಾಲಯದ ದ್ವಾರ ಮಂಟಪದ ಎದುರಿನ 25 ಅಡಿ ಎತ್ತರದ ಶಿಲಾಸ್ತಂಭ ಗಣೇಶ, ಶಿವ, ನಂದಿ, ಪಾರ್ವತಿ ಮತ್ತು ಭೈರವರ ಚಿತ್ರಗಳಿಂದ ಕೂಡಿದೆ.

ಶಿಲಾಮಯಗರ್ಭಗೃಹ, ಪ್ರದಕ್ಷಿಣಾಪಥ ಇಟ್ಟಿಗೆಗಳಿಂದ ಕಟ್ಟಿದ ಆಧುನಿಕ ಮಂಟಪ-ಇವುಗಳಿಂದ ಕೂಡಿದ ಪಾರ್ವತಿ ದೇವಾಲಯದಲ್ಲಿ ಉಮಾಮಹೇಶ್ವರ, ಭೈರವ, ಷಣ್ಮುಖ, ಗಣೇಶ, ಅಂಧಕಾಸುರನನ್ನು ವಧಿಸುತ್ತಿರುವ ನಟರಾಜ, ಪುರುಷ ಮೃಗ, ಕಣ್ಣಪ್ಪ ಮತ್ತು ಗಜಲಕ್ಷ್ಮಿಯರ ಸುಂದರ ಶಿಲ್ಪಗಳಿವೆ.  

ಇಲ್ಲಿಯವರೆಗೆ ಕೆಳದಿಯಲ್ಲಿ ಐದಾರು ಶಾಸನಗಳು ದೊರೆತಿವೆ.  ಇವುಗಳಲ್ಲಿ ಪ್ರಾಚೀನತಮವಾದದ್ದು 1189ರಲ್ಲಿ ಬರೆಯಲಾದ ಶಿಲಾಶಾಸನ.  ಇದು ಶಾಂತರ ಮನೆತನದ ಅರಸು ತ್ರಿಭುವನಮಲ್ಲ ಶಾಂತಿದೇವರಸನದು.  ವಿಜಯನಗರ ಸಾಮ್ರಾಟ ಒಂದನೆಯ ದೇವರಾಯನ ಆಳ್ವಿಕೆಯಲ್ಲಿ ಕೆಳದಿಯ ತಿಮ್ಮೇಗೌಡ ತೀರಿಕೊಂಡಾಗ ಅವನ ಪತ್ನಿ ರಾಮಕ್ಕ ಸಹಗಮನ ಮಾಡಿದಳೆಂದು ಮತ್ತೊಂದು ಶಿಲಾಶಾಸನ (1419) ತಿಳಿಸುತ್ತದೆ.  1631 ಹಾಗೂ 1671ರಲ್ಲಿ ಹೊರಡಿಸಲಾದ ಎರಡು ತಾಮ್ರ ಶಾಸನಗಳು ಅನುಕ್ರಮವಾಗಿ ಕೆಳದಿಯ ಅರಸುಗಳಾದ ವೀರಭದ್ರ ನಾಯಕ ಮತ್ತು ಸೋಮಶೇಖರ ನಾಯಕರ ದಾನ ಶಾಸನಗಳು.  ಶಿವಪ್ಪನಾಯಕನ ಆಳ್ವಿಕೆಯ ಶಿಲಾಶಾಸನ (1681) ವೀರಭದ್ರ ದೇವಾಲಯದ ಧ್ವಜಸ್ತಂಭದ ಪ್ರತಿಷ್ಟಾಪನೆಗೆ ಸಂಬಂಧಿಸಿದ್ದು. 

ಸುಮಾರು 1560ರ ವೇಳೆಗೆ ಕೆಳದಿ ಸಂಸ್ಥಾನದ ರಾಜಧಾನಿಯನ್ನು ಇಕ್ಕೇರಿಗೆ ಬದಲಾಯಿಸಲಾಗಿ ಅಂದಿನಿಂದ ಕೆಳದಿಯ ವೈಭವ ಇಳಿಮುಖವಾಯಿತು.  ಹಿಂದಿನ ವೈಭವಗಳೇನೂ ಈಗ ಅಲ್ಲಿ ಇಲ್ಲ. 			 (ನೋಡಿ- ಇಕ್ಕೇರಿ-ಚರಿತ್ರೆ)
                                                                  
 (ಕೆ.ವಿ.ಆರ್.; ಎಸ್.ಎಂ.)